ಇದು ರಾಗ ರತಿ ಆಲ್ಬಮ್ನ ಮತ್ತೊಂದು ಅತ್ಯಂತ ಜನಪ್ರಿಯ ಭಾವಗೀತೆ “ಮುನಿಯದಿರು ಓ ಗೆಳತಿ”. ಇದನ್ನು ಕೆ.ಸಿ. ಶಿವಪ್ಪ ಅವರು ಬರೆದಿದ್ದು, ವಿಜಯಭಾಸ್ಕರ್ ಅವರ ಪ್ರೇರಣಾದಾಯಕ ಸಂಗೀತ ಸಂಯೋಜನೆಯಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಅದ್ಭುತವಾಗಿ ಹಾಡಿದ್ದಾರೆ.
ಮುನಿಯದಿರು ಓ ಗೆಳತಿ
ಬಹುಕಾಲ ನನ್ನೊಡನೆ ಮನವನದ ಹೂಬಾಡಿ ಮುದುರುವುದು ಸರಸರನೆ…
ಮುನಿಯದಿರು ಓ ಗೆಳತಿ…
ತೇಲುತಿಹ ಕರಿಮುಗಿಲು ಸುರಿವಂತೆ ನೀರಹನಿ
ಮುನಿಸನ್ನು ಇಳಿಸಿಬಿಟ್ಟು ಮರೆತುಬಿಡು ಕೋಪದನಿ ।।
ನಾವೇನು ತಾರೆಗಳೆ? ಸಾವಿರದ ರವಿಶಶಿಯೆ?
ಕಾಲನಿಗೆ ಎದುರಾದ ಮುಕುಟಗಳ ನಾನರಿಯೆ
ಮುನಿಯದಿರು ಓ ಗೆಳತಿ…
ಬೆಸುಗೆಯನ್ನು ಸಡಿಲಿಸುವ ವಾಹಿವಾಟ ಸರಿಯಲ್ಲ
ರಸಸುಖವ ಸಮಹಂಚಿ ತೂರಿಬಿಡು ರೋಷವನು ।।
ನದಿಯಾಗಿ ಹರಿಯುವುದು ಶೀತಲದ ಮಂಜೆಲ್ಲ
ನಗುಮೊಗದ ಜೀವಸಖಿ ನೀ ತರಲು ಪ್ರೀತಿಯನು…
ಮುನಿಯದಿರು ಓ ಗೆಳತಿ…
ನೀಳಮರ ಹಿಮಮುಡಿದು ತಲೆದೂಗಿ ನಿಂತಿರಲು
ಮಾಗಿಚಳಿ ಅಪ್ಪುಗೆಯ ಸವಿಬಿಸಿಯ ತಂದಿರಲು ।।
ಕನಸುಕುಡಿ ಕವಲೊಡೆಯುವ ಈ ಸಮಯ ಅತಿಮಧುರ
ತುಟಿಕೂಡಿ ಒಲವೆಲ್ಲ ನಮಗಿರಲಿ ಆಧಾರ..
ಮುನಿಯದಿರು ಓ ಗೆಳತಿ
ಬಹುಕಾಲ ನನ್ನೊಡನೆ ಮನವನದ ಹೂಬಾಡಿ ಮುದುರುವುದು ಸರಸರನೆ…
ಮುನಿಯದಿರು ಓ ಗೆಳತಿ…
