ವಾರ್ಷಿಕ ಪ್ರಶಸ್ತಿಗಳು

ಪ್ರಶಸ್ತಿ

ಪ್ರಶಸ್ತಿ ಮತ್ತು ಪುರಸ್ಕಾರ ಸಂಸ್ಕೃತಿಯ ಸತ್ವ, ಸಾಹಿತ್ಯದ ಸೌರಭ ಮತ್ತು ಮೌಲ್ಯಗಳ ಆರಾಧನೆ
ಬಣ್ಣದ ಬಟ್ಟೆಯ ಮೇಲೆ ರಚಿಸು ನಗೆ ಚಿತ್ರ…ಕೊಡುತ ಮರೆವುದ ಕಲಿಯೋ ಮುದ್ದುರಾಮ

ಕನ್ನಡದ ಮಣ್ಣು ಜ್ಞಾನ, ಕಾವ್ಯ ಮತ್ತು ಆಧ್ಯಾತ್ಮದ ತ್ರಿವೇಣಿ ಸಂಗಮ. ಈ ಪುಣ್ಯಭೂಮಿಯಲ್ಲಿ ಕಾವ್ಯವೆಂಬುದು ಕೇವಲ ಅಕ್ಷರಗಳ ಜೋಡಣೆಯಾಗದೆ, ಬದುಕಿನ ಜಾಣಕಲೆಯನ್ನು ಕಲಿಸುವ ದಿಕ್ಸೂಚಿಯಾಗಿದೆ. ಡಿ.ವಿ.ಜಿ ಅವರ ‘ಮಂಕುತಿಮ್ಮನ ಕಗ್ಗ’ದ ದಾರ್ಶನಿಕ ಪರಂಪರೆಯನ್ನು ಇಂದಿನ ತಲೆಮಾರಿಗೆ ದಾಟಿಸಿದ ಕವಿ ಕೆ.ಸಿ. ಶಿವಪ್ಪ ಅವರ ‘ಮುದ್ದುರಾಮ’ ಚೌಪದಿಗಳು ನಮಗೆ ಮಾನವೀಯತೆಯ ಪರಮೋಚ್ಚ ಮೌಲ್ಯಗಳನ್ನು, ತ್ಯಾಗದ ಮಹತ್ವವನ್ನು ಮತ್ತು ಅಂತರಂಗದ ಅರಿವನ್ನು ಜಾಗೃತಗೊಳಿಸುವ ದಿವ್ಯ ಮಂತ್ರಗಳಾಗಿವೆ.

ಕನ್ನಡ ಸಾಹಿತ್ಯ, ಸಂಸ್ಕೃತಿ, ಲಲಿತಕಲೆಗಳು ಹಾಗೂ ಮೌಲ್ಯಾಧಾರಿತ ಶಿಕ್ಷಣದ ಮೂಲಕ ಸಮಾಜದ ಒಳಗಣ್ಣನ್ನು ತೆರೆಸುವ ಇಂತಹ ಉದಾತ್ತ ಸೃಷ್ಟಿಗಳು ಮತ್ತು ಸಾಧನೆಗಳು ನಿರಂತರವಾಗಿ ಸಾಗಬೇಕು. ಕಲೆ ಮತ್ತು ಸಾಹಿತ್ಯದ ಮೂಲ ಆಶಯವೇ ಸಮಾಜದ ಸಾಂಸ್ಕೃತಿಕ ವರ್ಧನೆ ಹಾಗೂ ನೈತಿಕ ಬೆಳವಣಿಗೆಯಾಗಿದೆ.

ಪ್ರಶಸ್ತಿಯ ಆಶಯ ಮತ್ತು ಉದ್ದೇಶ
ನಮ್ಮ ಪ್ರತಿಷ್ಠಾನವು ಕೇವಲ ಸಾಧನೆಯನ್ನು ಗುರುತಿಸುವುದಷ್ಟೇ ಅಲ್ಲ, ಆ ಸಾಧನೆಯ ಹಿಂದೆ ಅಡಗಿರುವ ಮೌಲ್ಯಾಧಾರಿತ ಬದ್ಧತೆಯನ್ನು ಗೌರವಿಸುತ್ತದೆ. ಕನ್ನಡ ಸಾಹಿತ್ಯ, ಸಂಸ್ಕೃತಿ, ಕಲೆ ಹಾಗೂ ಮೌಲ್ಯಾಧಾರಿತ ಶಿಕ್ಷಣ ಮುಂತಾದ ಪ್ರಕಾರಗಳಲ್ಲಿ, ವಿಶೇಷವಾಗಿ ಬದುಕಿನ ತತ್ವಗಳನ್ನು ಅತ್ಯಂತ ಸರಳವಾಗಿ ಜನಸಾಮಾನ್ಯರಿಗೆ ತಲುಪಿಸುವ ಚೌಪದಿ / ತ್ರಿಪದಿ ಸಾಹಿತ್ಯದ ಪ್ರಸಾರದಲ್ಲಿ ಗಣನೀಯ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮಹನೀಯರನ್ನು ಗುರುತಿಸುವುದು ನಮ್ಮ ಆಶಯವಾಗಿದೆ.

ತಮ್ಮ ಲೇಖನಿ, ಪ್ರವಚನ ಅಥವಾ ಕಲಾಮಾಧ್ಯಮಗಳ ಮೂಲಕ ಸಮಾಜದಲ್ಲಿ ಶಾಂತಿ, ಕರುಣೆ ಮತ್ತು ಸೌಹಾರ್ದತೆಯನ್ನು ಬಿತ್ತಿ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೆಚ್ಚಿಸುತ್ತಿರುವ ಧೀಮಂತ ಚೇತನಗಳನ್ನು ಗೌರವಿಸುವುದು ಪ್ರತಿಷ್ಠಾನದ ಪರಮ ಕರ್ತವ್ಯವೆಂದು ನಾವು ಭಾವಿಸುತ್ತೇವೆ.

ಪುರಸ್ಕಾರದ ವಿವರಗಳು
ಈ ಹಾದಿಯಲ್ಲಿ ನಿರಂತರವಾಗಿ ಕಾರ್ಯವೆಸಗುತ್ತಾ, ಬದುಕಿನ ಸತ್ತ್ವವನ್ನು ಸಮಾಜಕ್ಕೆ ಧಾರೆ ಎರೆಯುತ್ತಿರುವ ಮಹನೀಯರಿಗೆ ಪ್ರತಿಷ್ಠಾನವು ಪ್ರತಿವರ್ಷ ಅತ್ಯಂತ ಭಕ್ತಿಪೂರ್ವಕವಾಗಿ ಪ್ರಶಸ್ತಿಯನ್ನು ಪ್ರದಾನ ಮಾಡುತ್ತದೆ.

ಗೌರವಧನ: 50,000 ರೂ. (ಐವತ್ತು ಸಾವಿರ ರೂಪಾಯಿಗಳು)

ಗೌರವ ಸಮರ್ಪಣೆ: ಸ್ಮರಣಿಕೆ/ಗೌರವ ಫಲಕ ಮತ್ತು ಸನ್ಮಾನ

ಇಲ್ಲಿಯವರೆಗಿನ ಮುದ್ದುರಾಮ ಪ್ರಶಸ್ತಿ ಸ್ವೀಕರಿಸಿದವರ ಹೆಸರುಗಳು

ಸಾಲುಪ್ರಶಸ್ತಿ ಸ್ವೀಕರಿಸಿದವರು
2026ಪ್ರೊ|| ಎಂ ಕೃಷ್ಣೇಗೌಡ
2025ಡಾ|| ಟಿ ವಿ ವೆಂಕಟಾಚಲಶಾಸ್ತ್ರಿ
2024ಪ್ರೊ|| ಆ ರಾ ಮಿತ್ರ
2023ಶ್ರೀ ಹಿರೇಮಗಳೂರು ಕಣ್ಣನ್
2022ಡಾ|| ಗುರುರಾಜ ಕರಜಗಿ