ಕವಿ ಕೆ. ಸಿ. ಶಿವಪ್ಪ (KCS) ಅವರ ‘ನಿನ್ನದೇ ಆ ಚಿತ್ರ’ ಕವಿತೆಯು ಪ್ರಕೃತಿಯ ಸೌಂದರ್ಯದೊಂದಿಗೆ ಪ್ರೇಮದ ಆಳವಾದ ಭಾವನೆಗಳನ್ನು ಬೆಸೆದಿರುವ ಒಂದು ಅದ್ಭುತ ಪ್ರಣಯ ಗೀತೆ. ಈ ಕವಿತೆಯಲ್ಲಿ ವಿರಹ ಮತ್ತು ಮಿಲನದ ಹಂಬಲ ಎರಡೂ ಎದ್ದು ಕಾಣುತ್ತವೆ. ಪ್ರಕೃತಿಯಲ್ಲಿ ನಡೆಯುವ ಪ್ರತಿಯೊಂದು ಸುಂದರ ವಿದ್ಯಮಾನವೂ ನಾಯಕಿಗೆ ತನ್ನ ಪ್ರಿಯಕರನ ಮುಖವನ್ನೇ ನೆನಪಿಸುತ್ತದೆ.
ನದಿಯು ವಯ್ಯಾರದಿಂದ ನಡೆದು ಸಾಗರದ ಒಡಲನ್ನು ಸೇರುವಂತೆ ಸರಿತೆ ವಯ್ಯಾರದಲಿ ಕಡಲೊಡಲ ಬೆರೆತಾಗ, ನಾಯಕಿಯ ಪ್ರತಿ ಆಲೋಚನೆ, ಪ್ರಕೃತಿಯ ಪ್ರತಿ ತಂಗಾಳಿ, ಬಿಳಿ ಮೋಡದ ಮಳೆ ಎಲ್ಲವೂ ಕೊನೆಗೆ ಬಂದು ನಿಲ್ಲುವುದು ಪ್ರಿಯಕರನ ನೆನಪಿನಲ್ಲೇ. ಜಗತ್ತಿನ ಅತ್ಯುನ್ನತ ಸೌಂದರ್ಯ ಮತ್ತು ಮೌನ ಒಟ್ಟಿಗೆ ಸೇರಿದಾಗ ಮೂಡುವ ಅದ್ಭುತ ಕೃತಿಯೇ ಆ “ಇನಿಯನ ಚಿತ್ರ”. ಕೇವಲ ಕಣ್ಣಿಗೆ ಕಾಣುವ ಚಿತ್ರ ಇದಲ್ಲ, ಇದು ಪ್ರೇಮದ ತನ್ಮಯತೆಯಿಂದ ಮೂಡಿದ ಹೃದಯದ ಬಿಂಬ.
ರವಿಕಿರಣ ಕಾಂತಿಯನು ಉಷೆತುಟಿಗೆ ಒಯ್ದಾಗ
ನೀ ಬರುವೆ ಓ ಇನಿಯ ನನ್ನ ಕಣ್ಮುಂದೆ.
ಕಿರುತಾರೆ ಮಿರಮಿರನೆ ಮಿನುಮಿನುಗಿದಾಗೆಲ್ಲ
ಓ ಇನಿಯ, ಕಣ್ಮುಂದೆ ನಿನ್ನದೇ ಚಿತ್ರ!
ಪಾರಿಜಾತದ ಕಂಪು ಮುದದ ತವರಾದಾಗ
ನೈದಿಲೆಯೆ ದಳ ಬಿರಿದು ಬಣ್ಣತೆನೆಯಾದಾಗ
ಕಂಡು ರವಿಮೊಗ ಕಮಲ ಅರಳಿ ನಿಂತಾಗೆಲ್ಲ
ಓ ಇನಿಯ, ಕಣ್ಮುಂದೆ ನಿನ್ನದೇ ಚಿತ್ರ!
ಬಿಳಿಮುಗಿಲು ಮಳೆಗರೆದು ಇಳೆ ಬಳಿಗೆ ಬಂದಾಗ
ಇನಿರಾಗ ಒಲಿದೊಲಿದು ನಾದಮಯವಾದಾಗ
ಇರುಳಕನಸಲಿ ಮದನ ಮೊಗದೋರಿದಾಗೆಲ್ಲ
ಓ ಇನಿಯ, ಕಣ್ಮುಂದೆ ನಿನ್ನದೇ ಚಿತ್ರ!
ನಗೆಬಳ್ಳಿ ಚಿಗುರೊಡೆದು ಸೊಂಪಿನಲೆಯಾದಾಗ
ಸರಿತೆ ವಯ್ಯಾರದಲಿ ಕಡಲೊಡಲ ಬೆರೆತಾಗ
ಮಂದ ಮಾರುತ ಮೆಲ್ಲ ತಂಪನೆರೆದಾಗೆಲ್ಲ
ಓ ಇನಿಯ, ಕಣ್ಮುಂದೆ ನಿನ್ನದೇ ಚಿತ್ರ!
ಅತಿಶಯತೆ ಕೌಶಲದಿ ಸೌಂದರ್ಯವಾದಾಗ
ತನ್ಮಯತೆ ಮೈದೋರಿ ನೀರವತೆಯಾದಾಗ
ಮೋಹಕತೆ ಭಿತ್ತಿಯಲಿ ಬಿಂಬವಾದಾಗೆಲ್ಲ
ಓ ಇನಿಯ, ಕಣ್ಮುಂದೆ ನಿನ್ನದೇ ಚಿತ್ರ!