
ಮಾನ್ಯ ಕೆ.ಸಿ ಶಿವಪ್ಪನವರು
ಹುಟ್ಟಿದ್ದು (26.07.1937) ಚಾಮರಾಜನಗರ ಜಿಲ್ಲೆಯ ಕಾಗಲವಾಡಿಯಲ್ಲಿ. ರಾಮಸಮುದ್ರ, ಚಾಮರಾಜನಗರದಲ್ಲಿ ಪ್ರಾಥಮಿಕ ಶಿಕ್ಷಣ. ಮೈಸೂರಿನ ಯುವರಾಜ ಹಾಗೂ ಮಹಾರಾಜ ಕಾಲೇಜುಗಳಲ್ಲಿ ಉನ್ನತ ವಿದ್ಯಾಭ್ಯಾಸ; ಎಂ.ಎಸ್ಸಿ ಪದವಿ. ಸರ್ಕಾರಿ ತರಬೇತಿ ಮಹಾವಿದ್ಯಾಲಯ(ಮೈಸೂರು) ಮತ್ತು ಕೇಂದ್ರೀಯ ಚರ್ಮಸಂಶೋಧನಾಲಯ(ಚೆನ್ನೈ) ದಲ್ಲಿ ಕಾರ್ಯನಿರ್ವಹಣೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗ ನಿರ್ದೇಶಕರಾಗಿ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಜಂಟಿನಿರ್ದೇಶಕರಾಗಿ, ಕರ್ನಾಟಕ ಸರ್ಕಾರದ ಸಚಿವಾಲಯದ ವಿಶೇಷಾಧಿಕಾರಿಯಾಗಿ ಹಾಗೂ ಜೆಎಸ್ಎಸ್ ಮಹಾವಿದ್ಯಾಪೀಠದ ಪ್ರಕಟಣ ವಿಭಾಗದಲ್ಲಿ ನಿರ್ದೇಶಕರಾಗಿ ಸೇವೆ.
ರಾಗರತಿ, ಅನುರಾಗ, ರಾಧಾಮಾಧವ, ಚಿತ್ತಭಿತ್ತಿ, ಚಿತ್ತವೃತ್ತಿ, ಚಿತ್ರಾಂಬರ, ಚೆಂಬೆಳಕು, ಚಿದಾನಂದ, ಚೆಲುವೆ, ಚಂದ್ರಿಕೆ, ಚಾರುಲತೆ, ಚಿತ್ರಪತ್ರ (ಕವನಸಂಕಲನಗಳು). ಕೆಸಿಎಸ್ ಸಮಗ್ರಕಾವ್ಯ (ಸಂಪುಟ1: ನೆನಪು ಮಂದಾರ; ಸಂಪುಟ 2: ಚೈತ್ರ ಚೈತನ್ಯ). ಮುದ್ದುರಾಮನ ಮನಸು, ಮುದ್ದುರಾಮನ ಬದುಕು, ಮುದ್ದುರಾಮನ ಅರಿವು, ಮುದ್ದುರಾಮನ ನಲಿವು, ಮುದ್ದುರಾಮನ ಬೆರಗು, ಮುದ್ದುರಾಮನ ಬೆಡಗು, ಮುದ್ದುರಾಮನ ಚೆಲುವು, ಮುದ್ದುರಾಮನ ಒಲವು, ಮುದ್ದುರಾಮನ ಗೆಲುವು, ಮುದ್ದುರಾಮನ ನಿಲುವು (ಚೌಪದಿಗಳ ಸಂಕಲನ). ಬದುಕಿಗೊಂದು ಭರವಸೆ, ಚಿತ್ರವಿಚಿತ್ರ (ವ್ಯಕ್ತಿತ್ವ ವಿಕಸನ). ಮೌನಸ್ಪಂದನ, ಚಿತ್ರಪರಿಪಾಕ (ಚಿಂತನ ಬಿಡಿನುಡಿಸಂಚಯ). ಜೀವಸತ್ತ್ವಗಳು, ಬೆಡಗಿನ ಬಾಟಿಕ್, ಭೂಮಿ, ಶುಕದೆಸೆ (ಅನುವಾದ). ಅರವಿಂದ ದರ್ಶನ, ವಂದನಾ ವಿಶ್ವಧರ್ಮ ದರ್ಶನ ಸಂಪುಟ, ರಾಜೇಂದ್ರ ಚಿತ್ರಸಂಪುಟ, ರಾಜೇಂದ್ರ ನಡಿನಮನ, ರಾಜೇಂದ್ರ ಕವನಕುಸುಮ (ಸಂಪಾದನೆ). ಬಾಳಬಣ್ಣ, ಪಂಚತಂತ್ರದ ಕತೆಗಳು, ವಿನಯ ಕನ್ನಡ ಭಾರತಿ (ಇತರೇ). ವಚನ ದರ್ಶನ, ವಚನ ಸೂಕ್ತಿ ಸಂಚಯ – ಹೀಗೆ ಹಲವು ಕೃತಿಗಳ ಲೇಖಕರು. ಇಂಗ್ಲಿಷಿನಲ್ಲಿಯೂ ಹಲವು ಕೃತಿಗಳು ಪ್ರಕಟಗೊಂಡಿವೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಕೃತಿ ಪ್ರಶಸ್ತಿ, ಡಿ.ವಿ.ಜಿ. ಮುಕ್ತಕ ಸಾಹಿತ್ಯ ಪ್ರಶಸ್ತಿ, ರಮಣಶ್ರೀ ಶರಣ ಪ್ರಶಸ್ತಿ, ಬಸವ ವೇದಿಕೆಯ ವಚನಸಾಹಿತ್ಯಶ್ರೀ ಪ್ರಶಸ್ತಿ, ಹಲಸಂಗಿ ಗೆಳೆಯರ ಪ್ರತಿಷ್ಠಾನ ಪ್ರಶಸ್ತಿ, ಕುಲಪತಿ ಕೆ.ಎಂ.ಮುನ್ಷಿ ಸನ್ಮಾನ, ಸಾಹಿತ್ಯ ಅಕಾಡೆಮಿ ಹಾಗೂ ದಸರಾ ಕವಿಗೋಷ್ಠಿಗಳ ಅಧ್ಯಕ್ಷತೆ, ಚಾಮರಾಜನಗರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ.
ಬೆಂಗಳೂರು ದಕ್ಷಿಣ ರೋಟರಿ ಕ್ಲಬ್ನ ಅಧ್ಯಕ್ಷರು, ಭಾರತೀಯ ವಿದ್ಯಾಭವನದ ಗೌ.ಕಾರ್ಯದರ್ಶಿ. ಪ್ರಸಾದ, ಶರಣಪಥ, ಜಿಶಿರ, ನಾವು-ನೀವು, ಮಲ್ಲಿಗೆ ಮೊದಲಾದ ನಿಯತಕಾಲಿಕೆಗಳ ಪ್ರಧಾನ ಸಂಪಾದಕತ್ವ, ಹತ್ತಾರು ಧ್ವನಿಸುರುಳಿ – ಸಿ.ಡಿ.ಗಳ ರಚಯಿತರು. ಅಮೆರಿಕಾ, ಯೂರೋಪ್ ರಾಷ್ಟ್ರಗಳು, ಮೆಕ್ಸಿಕೊ, ಸಿಂಗಪುರ್, ಇಂಡೋನೇಷ್ಯ ಮುಂತಾದ ದೇಶಗಳ ಪ್ರವಾಸ, ಸದ್ಯ ಮೈಸೂರಿನಲ್ಲಿ ನೆಲೆಸಿದ್ದಾರೆ.